ಸರಿವ ಸಮಯ ದೈನಂದಿನ ಕೆಲಸ ಕಾರ್ಯಗಳ ನಡುವೆ ನಾವು ನಮ್ಮ ಬಾಲ್ಯದ ದಿನಗಳನ್ನು ಮರೆಯುತ್ತಿದ್ದೇವೆ . ಒಮ್ಮೆ ಯೋಚಿಸಿ ನೋಡಿ ನಿಮ್ಮ ಬಾಲ್ಯಕ್ಕೆ ನೀವು ಹಿಂತಿರುಗಲು ಸಾಧ್ಯವೇ, ಉತ್ತರ ಇಲ್ಲ. ನಾವು ನಡೆದುಬಂದ ದಾರಿ ಹೇಗಿದೆ ? ಅಲ್ಲಿ ಕಳೆದ ಸಮಯ ಹೇಗಿತ್ತು ? ನಮ್ಮವರು ಯಾರು ? ಹೀಗೆ ನೆನಪುಗಳ ಮೆಲುಕು ಹಾಕಿದಾಗ ಎಲ್ಲವೂ ನಮ್ಮ ಕಣ್ಣ ಮುಂದೆ ಬಂದು ಕೂರುತ್ತದೆ .
ನಾವು ಕಳೆದಂತಹ ಸಮಯವು ಯಾವುದಕ್ಕಾಗಿ ಕಳೆದಿದ್ದೇವೆ ? ಹಾಗೂ ಅದರಿಂದ ನಮಗೆ ದೊರೆತ್ತಿದ್ದಾದರೂ ಏನು ? ಉತ್ತಮರೊಂದಿಗೆ ಕಳೆದ ಕ್ಷಣಗಳು ಸ್ಮರಣೀಯವಾದರೆ ಬೆನ್ನಿಗೆ ನಿಂತಂತೆ ನಟಿಸಿದವರ ಜೊತೆಗೆ ಕಳೆದ ಕ್ಷಣಗಳು ಮತ್ತೆ ಮತ್ತೆ ನಮ್ಮನ್ನು ಕಾಡುತ್ತವೆ . ಬಾಲ್ಯ ಎಂದಾಕ್ಷಣ ಅಲ್ಲಿ ನಡೆದ ಘಟನೆಗಳು ಸ್ನೇಹಿತರೊಂದಿಗಿನ ಆಟ ಪಾಠಗಳು ನಮ್ಮೂರ ಶಾಲೆ ಎಲ್ಲವೂ ನೆನಪಿಗೆ ಬರುತ್ತದೆ .
ಆ ದಿನಗಳು ಎಸ್ಟೊಂದು ಚಂದ ಇದ್ದವು ಎನಿಸದೆ ಇರಲಾರವು . ನಿಮಗೂ ಕೂಡ ಹೀಗೆ ಅನಿಸಿರಬಹುದು . ಆ ದಿನಗಳಲ್ಲಿ ಯಾವುದೇ ಚಿಂತೆಯಿಲ್ಲದೆ ಎಲ್ಲರೊಂದಿಗೆ ಬೆರೆತು ಕೂಡಿ ಕಳೆಯುತ್ತಿದ್ದೆವು . ಬಡವ ಶ್ರೀಮಂತ ಎಂಬ ಬೇಧ ಭಾವಗಳಿಲ್ಲದೆ ಎಲ್ಲರೂ ಒಟ್ಟಿಗೆ ಬೆಳೆಯುತ್ತಾ ಸಂತೋಷದಿಂದ ನಲಿಯುತ್ತಿದ್ದೆವು. ಆದರೆ ಇಂದು ಎಲ್ಲಾ ಬದಲಾಗಿದೆ , ಬಾಲ್ಯದಲ್ಲಿ ಹಬ್ಬಗಳು ಬಂದವೆಂದರೆ ಖುಷಿಯಿಂದ ಹೊಸ ಬಟ್ಟೆ ತೊಟ್ಟು ಹಿರಿಯರಿಗೆ ವಂದಿಸುತ್ತಾ ಹಬ್ಬಗಳನ್ನು ಆಚರಿಸುತ್ತಾ , ಇರುತ್ತಿದ್ದೆವು. ಕಾಲ ಕಳೆದಂತೆ ನಾವು ಮನೆಯ ಜವಾಬ್ದಾರಿ ಹೊತ್ತಾಗ ಗೊತ್ತಾಗುತ್ತದೆ . ಆ ಸಮಯದಲ್ಲಿ ತಂದೆ ತಾಯಿ ಪಟ್ಟಂತಹ ಕಷ್ಟಗಳು ಎಂತಹವುಗಳೆಂದು. ಅಂದು ಒಂದು ಒತ್ತು ಊಟಕ್ಕೆ ಇಲ್ಲದಿದ್ದರೂ ತಮ್ಮ ಮಕ್ಕಳಿಗೆ ಇರಲಿ ಎಂದು ಕೂಡಿಟ್ಟು ಬೆಳೆಸಿದರು .
ತಾವು ಹರಕು ಬಟ್ಟೆ ಹಾಕಿದರು ತಮ್ಮ ಮಕ್ಕಳಿಗೆ ಹೊಸ ಬಟ್ಟೆ ತಂದು ಕೊಟ್ಟರು . ತಾವು ಹರಿದ ಚಪ್ಪಲಿ ಹಾಕಿದರು ಮಕ್ಕಳ ಮುಂದೆ ಅದನ್ನು ತೋರಿಸಲಿಲ್ಲ , ಇದನ್ನು ಆ ಸಮಯದಲ್ಲಿ ಮಕ್ಕಳು ಅರಿಯಲು ಸಾಧ್ಯವೇ ? ಖಂಡಿತ ಇಲ್ಲ ಏಕೆಂದರೆ ಮಕ್ಕಳು ಆಗ ಅವರು ತಂದು ಕೊಟ್ಟ ಹೊಸ ಬಟ್ಟೆ ತೊಟ್ಟು ಖುಷಿಯಲಿರುತ್ತಾರೆ. ಈಗ ಅದೇ ಮಕ್ಕಳು ಪ್ರಾಪ್ತ ವಯಸ್ಸಿಗೆ ಬಂದು ಯಾವುದೋ ಒಂದು ನೌಕರಿ ಹಿಡಿದು ಆ ಸಮಯದಲ್ಲಿ ತಂದೆ ತಾಯಿ ಪಟ್ಟಂತಹ ಕಷ್ಟಗಳು ಅನುಭವ ಪಡೆದಾಗ ಮಾತ್ರ ಅದು ಗೊತ್ತಾಗುತ್ತದೆ . ತಮ್ಮ ತಂದೆ ತಾಯಿ ಎಸ್ಟೇ ಕಷ್ಟ ಬಂದರು ತಮ್ಮನ್ನು ಬಿಟ್ಟು ಕೊಡಲಿಲ್ಲ ಎಂಬುದು ಅರಿವಾಗುತ್ತದೆ.
ದುರಾದೃಷ್ಟವಶಾತ್ ಈಗಿನ ಮಕ್ಕಳಿಗೆ ತಂದೆ ತಾಯಿ ಕಷ್ಟಗಳನ್ನು ಅರಿಯಲು ತಾಳ್ಮೆಯೇ ಇಲ್ಲವಾಗಿದೆ, ಅರಿತರು ಅದು ತುಂಬಾ ವಿರಳ ಹಾಗೂ ಸಮಯ ಅಷ್ಟೊತ್ತಿಗಾಗಲೇ ಮೀರುತ್ತದೆ .
ಕೊನೆಯದಾಗಿ ಹೇಳುವುದೊಂದೇ ನೀವು ಏನೇ ಸಾಧನೆ ಮಾಡಿ, ಎಷ್ಟೇ ಎತ್ತರಕ್ಕೆ ಬೆಳೆಯಿರಿ, ಸಾಮಾನ್ಯ ಕೂಲಿ ಮಾಡಿದರು ಸಹ ಹೆತ್ತವರಿಗೆ ಯಾವತ್ತೂ ಕಷ್ಟ ಕೊಡಬೇಡಿ, ಅವರ ಕೈ ಬಿಡಬೇಡಿ , ಅವರಿಂದ ನೀವು, ನಿಮ್ಮಿಂದ ಅವರಲ್ಲ.

